154 ವರುಷಗಳ ಹಿಂದೆಯೇ ಕರ್ನಾಟಕ ಪದ ಪ್ರಯೋಗಿಸಿದ ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪ

ಕನ್ನಡ ಸಂಸ್ಕೃತಿ ಮತ್ತು ಚರಿತ್ರೆಯ ಭಾಗವೇ ಆಗಿರುವ ಧಾರವಾಡದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜು (ಅಂದರೆ ಈಗಿನ ಡಯಟ್) ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕೆ ತನ್ನದೇ ಆದ ಬಹುದೊಡ್ಡ ಕೊಡುಗೆ ನೀಡಿದ್ದನ್ನು ಮರೆಯುವಂತಿಲ್ಲ. ಕರ್ನಾಟಕ ಏಕೀಕರಣ ಚಳುವಳಿಯೂ ಸೇರಿದಂತೆ ಕನ್ನಡ ಜಾಗೃತಿಯ ಅನೇಕ ವಿಧಾಯಕ ಕೈಂಕರ್ಯಗಳು ಟ್ರೈನಿಂಗ್ ಕಾಲೇಜಿನ ನೆಲದಲ್ಲಿ ನಡೆದಿರುವುದು ಕನ್ನಡ ಚರಿತ್ರೆಯ ಪುಟಗಳಲ್ಲಿ ದಾಖಲಾಗಿವೆ. ಗಂಡು ಮಕ್ಕಳ ಟ್ರೈನಿಂಗ್ ಕಾಲೇಜಿನ ಮುಖ್ಯಸ್ಥರಾಗಿದ್ದ ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪನವರು ಕನ್ನಡ ಪ್ರಾಥಮಿಕ ಶಿಕ್ಷಣ ಸಂವರ್ಧನೆಯ ಅನಂತ ಕನಸುಗಳನ್ನು ಹೊತ್ತುಕೊಂಡು 1865 ಏಪ್ರಿಲ್ ತಿಂಗಳಲ್ಲಿ ತಮ್ಮ ಸಂಪಾದಕತ್ವದಲ್ಲಿ ಆರಂಭಿಸಿದ ಮಠಪತ್ರಿಕೆಯ ಮೊದಲ ಸಂಪಾದಕೀಯದಲ್ಲಿಯೇ ಈ ಕಣರ್ಾಟಕ ಸೀಮೆಯಲ್ಲಿ ಶುದ್ಧವಾದ ಕನ್ನಡ ಭಾಷೆಯ ವಿಸ್ತಾರವು ಆಗತಕ್ಕದ್ದು… ಎಂದು ಉಲ್ಲೇಖಿಸಿ, 154 ವರ್ಷಗಳ ಹಿಂದೆಯೇ ನಮ್ಮ ಕನ್ನಡ ನಾಡಿಗೆ ಕಣರ್ಾಟಕ (ಕರ್ನಾಟಕ) ಎಂಬ ಶಬ್ಧ ಪ್ರಯೋಗಿಸಿದ್ದು ಒಂದು ವಿಶಿಷ್ಟ ದಾಖಲೆಯೇ ಸರಿ. 1833 ನವ್ಹೆಂಬರ್ 1, ರಾಜ್ಯೋತ್ಸವದ ದಿನದಂದೇ ಡೆಪ್ಯೂಟಿ ಚೆನ್ನಬಸಪ್ಪನವರ ಜನನವಾಗಿದ್ದು, ಡೆಪ್ಯೂಟಿ ಅವರ 187ನೇ ಜಯಂತಿಯೂ ಸಮ್ಮಿಳಿತವಾಗಿದ್ದು, ನಮ್ಮ ಕನ್ನಡ ಸಂಸ್ಕೃತಿ-ಪರಂಪರೆಯ ಭಾಗವೇ ಆಗಿದೆ . ಪ್ರತೀ ವರ್ಷ ಓರ್ವ ಕನ್ನಡದ ಕಟ್ಟಾಳುವಿನ ಹುಟ್ಟುಹಬ್ಬವನ್ನು ಈ ರೀತಿ ಖುಷಿಯಿಂದ ಆಚರಿಸಲು ಅತ್ಯಂತ ಹೆಮ್ಮೆ ಎನಿಸುತ್ತದೆ..

ಕನ್ನಡ ನಾಡಿನ ಸಾಂಸ್ಕೃತಿಕ ರಾಜಧಾನಿ ಧಾರವಾಡದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜು ಕನ್ನಡದ ಮನಸ್ಸುಗಳನ್ನು ಕಟ್ಟಿ ಬೆಳೆಸಿ ಕನ್ನಡ ಸಂಸ್ಕೃತಿಯ ಸಿಂಚನಗೈದ, ಆ ಮೂಲಕ ಕನ್ನಡವು ಜನಭಾಷೆಯಾಗಿ ಎಲ್ಲೆಡೆ ಹಂಚಿಕೆಯಾಗುವಲ್ಲಿ ಅಹರ್ನಿಶಿ ಶ್ರಮಿಸಿದ, ಕನ್ನಡ ಶಿಕ್ಷಣದ ಪ್ರಸಾರಕ್ಕಾಗಿಯೇ 1856ರಲ್ಲಿ ಹುಟ್ಟಿಕೊಂಡ ಚಾರಿತ್ರಿಕ ಸಂಸ್ಥೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ 163 ವರುಷಗಳ ಹಿಂದೆಯೇ ಅನೇಕ ನೆಲೆಗಳಲ್ಲಿ ತನ್ನದೇ ಆದ ಕ್ರಿಯಾಪ್ರೇರಕ ಚಟುವಟಿಕೆಗಳನ್ನು ವಿಧಾಯಕಗೊಳಿಸಿದ ಹಿರಿಮೆ ಈ ಸಂಸ್ಥೆಗಿದೆ. ಇದಕ್ಕೆಲ್ಲ ಮೂಲ ಪ್ರೇರಕ ಶಕ್ತಿ ಎಂದರೆ ಕನ್ನಡದ ಶಕಪುರುಷ, ಕನ್ನಡದ ಕಟ್ಟಾಳು ಡೆಪ್ಯೂಟಿ ಚನ್ನಬಸಪ್ಪ ಅವರು. ದೂರದೃಷ್ಟಿಯ ನೆಲೆಯಲ್ಲಿ ಟ್ರೈನಿಂಗ್ ಕಾಲೇಜನ್ನು ಬೆಳೆಸಿ, ಆ ಮೂಲಕ ಕನ್ನಡ ಪ್ರಾಥಮಿಕ ಶಿಕ್ಷಣಕ್ಕೆ ಭದ್ರ ನೆಲೆ ನೀಡಿದ ಮಹಾಪುರುಷ. ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿಯೇ ಹುಟ್ಟಿಕೊಂಡ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜು ಮತ್ತು ಡೆಪ್ಯೂಟಿ ಚೆನ್ನಬಸಪ್ಪ ಅವರ ಕನ್ನಡದ ಬದುಕನ್ನು ಮೆಲಕು ಹಾಕಿ ಸ್ಮರಣೆ ಮಾಡಿಕೊಳ್ಳುವುದೂ ಅಷ್ಟೇ ಸಂತೋಷದ ಸಂಗತಿ.

1833 ನವೆಂಬರ್ 1 ರಂದು ಜನಿಸಿದ ಡೆಪ್ಯೂಟಿ ಚೆನ್ನಬಸಪ್ಪ ಇವರ ಪೂರ್ಣ ಹೆಸರು ಚೆನ್ನಬಸಪ್ಪ ಬಸಲಿಂಗಪ್ಪ ಧಾರವಾಡ. ತಮಗೆ ಲಭಿಸಿದ್ದ ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡೆಪ್ಯೂಟಿ ಎಜ್ಯೂಕೇಷನಲ್ ಇನ್ಸಪೆಕ್ಟರ್ ಹುದ್ದೆಯ ಸ್ಥಾನಬಲದಿಂದ ಅವಿಶ್ರಾಂತವಾಗಿ ಶ್ರಮಿಸಿ, ಕನ್ನಡ ಭಾಷೆ, ಕನ್ನಡ ನಾಡು, ಕನ್ನಡ ಮಾಧ್ಯಮದ ಶಿಕ್ಷಣ, ಜೊತೆಗೆ ಕನ್ನಡಿಗರೆಲ್ಲರ ವಿಕಾಸಕ್ಕಾಗಿ ತಮ್ಮ ಅಖಂಡ ಬದುಕನ್ನೇ ಸಮಪರ್ಿಸಿ ಪ್ರಾತಃಸ್ಮರಣೀಯರಾದವರು. ಕನ್ನಡಮ್ಮನ ಗರ್ಭಗೃಹದಲ್ಲಿ ತುಂಬಿಕೊಂಡಿದ್ದ ಕತ್ತಲೆಯನ್ನು ಹೊಡೆದೋಡಿಸಿ ಶಾಶ್ವತವಾಗಿ ಕನ್ನಡದ ಬೆಳಕು ಹರಡುವಲ್ಲಿ ಕನ್ನಡದ ದೀಪವಾಗಿರುವ ಡೆಪ್ಯೂಟಿ ಚೆನ್ನಬಸಪ್ಪ ಅವರು, ಕನ್ನಡ ಅಕ್ಷರ ಸಂಸ್ಕೃತಿಯನ್ನು ವಿಶೇಷವಾಗಿ ಉತ್ತರ ಕರ್ನಾಟಕ ಪ್ರಾಂತದಲ್ಲಿ ಉಳಿಸಿ ಬೆಳೆಸಲು ಕಾರಣರಾಗಿದ್ದಾರೆ. ಕರ್ನಾಟಕದ ಭೂಪ್ರದೇಶವು ಸಮಗ್ರತೆಯಿಂದ ಉಳಿದು ಈಗ ನಾವು ನೋಡುತ್ತಿರುವ ಕರ್ನಾಟಕದ ನಕ್ಷೆ ಸಿದ್ಧಗೊಳ್ಳಲು ಡೆಪ್ಯೂಟಿ ಚೆನ್ನಬಸಪ್ಪ ಅವರ ಕೊಡುಗೆಯೂ ಇಲ್ಲಿ ಸಮ್ಮಿಳಿತವಾಗಿದೆ.

ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಈಗಿನ ಬಹುಪಾಲು ಪ್ರದೇಶವನ್ನು ದಕ್ಷಿಣ ಮಹಾರಾಷ್ಟ್ರ ಎಂದೇ ಸಂಬೋಧಿಸುತ್ತಿದ್ದ ಪೇಶ್ವೆಯರ ಆಡಳಿತದ ಕಾಲಘಟ್ಟದಲ್ಲಿ ಧಾರವಾಡದಂತಹ ಅಚ್ಚ ಕನ್ನಡದ ಪ್ರದೇಶಗಳೂ ಸಹ ಮರಾಠಿಮಯವಾಗಿದ್ದವು. ಕನ್ನಡ ಜನಭಾಷೆ ಬಳಕೆಯಲ್ಲಿರುವ ಕನ್ನಡದ ಮತ್ತು ಕನ್ನಡಿಗರ ಪ್ರದೇಶ ಎಂದು ತಿಳಿವಳಿಕೆ ಕೊಟ್ಟು ಇವುಗಳನ್ನು ಮರಳಿ ಕನ್ನಡಕ್ಕೇ ಉಳಿಸಿಕೊಳ್ಳುವಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಯಶಸ್ವಿಯಾದರು.

ಕನ್ನಡ ಜನವಸತಿ ಪ್ರದೇಶಗಳ ಜನರು ಕನ್ನಡ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆಯಬೇಕು, ಅದಕ್ಕಾಗಿ ಹೆಚ್ಚೆಚ್ಚು ಕನ್ನಡ ಶಾಲೆಗಳನ್ನು ಆರಂಭಿಸಬೇಕೆಂದು ಬಲವಾಗಿ ಪ್ರತಿಪಾದಿಸಿದರು. ಉತ್ತರ ಕರ್ನಾಟಕದಲ್ಲಿ  ಕನ್ನಡ ಪ್ರಾಥಮಿಕ ಶಾಲೆಗಳು ಆರಂಭವಾಗಲು ಕಾರಣರಾದವರು ಡೆಪ್ಯೂಟಿ ಚೆನ್ನಬಸಪ್ಪನವರು. ಕನ್ನಡ ಶಾಲಾ ಮಾಸ್ತರರಿಗೆ ತರಬೇತಿ ನೀಡಲು ಧಾರವಾಡದಲ್ಲಿ ಹುಟ್ಟಿಕೊಂಡ ತರಬೇತಿ ಶಾಲೆಯೇ ಮುಂದೆ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜು ಎಂದು ಪ್ರಸಿದ್ಧವಾಯಿತು. ಇದರ ಮುಖ್ಯಸ್ಥರಾಗಿದ್ದ ಡೆಪ್ಯೂಟಿ ಚೆನ್ನಬಸಪ್ಪನವರು ಕನ್ನಡ ಕಲಿಸುವ ಶ್ರೇಷ್ಠ ಶಿಕ್ಷಕರನ್ನು ತರಬೇತಿಗೊಳಿಸುವಲ್ಲಿ ಯಶಸ್ವಿಯಾದರು. ಇಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಹೊಸದಾಗಿ ಆರಂಭಗೊಳ್ಳುವ ಕನ್ನಡ ಶಾಲೆಗಳಿಗೆ ನೇಮಕ ಮಾಡಲಾಗುತ್ತಿತ್ತು. ಇದರಿಂದಾಗಿ ಅಧಿಕ ಸಂಖ್ಯೆಯ ಕನ್ನಡ ಶಾಲೆಗಳ ಆರಂಭ ಹಾಗೂ ಕನ್ನಡ ಕಲಿಕೆ ಸಾಧ್ಯವಾಯಿತು.

ಕರ್ನಾಟಕ ಶಬ್ದ ಪ್ರಯೋಗ : ಡೆಪ್ಯೂಟಿ ಚನ್ನಬಸಪ್ಪನವರು ಏಪ್ರಿಲ್- 1865ರಲ್ಲಿ ಆರಂಭಿಸಿದ ಶೈಕ್ಷಣಿಕ ಮಾಸಿಕ ಮಠ ಪತ್ರಿಕೆಯ ಮೊದಲ ಸಂಚಿಕೆಯ ಸಂಪಾದಕೀಯದ ಮೊದಲ ಸಾಲಿನಲ್ಲಿಯೇ …ಈ ಕರ್ಣಾಟಕ ಸೀಮೆಯಲ್ಲಿ ಶುದ್ಧವಾದ ಕನ್ನಡ ಭಾಷೆಯ ವಿಸ್ತಾರವು ಆಗತಕ್ಕದ್ದು… ಎಂದು ಉಲ್ಲೇಖಿಸಿ, 154 ವರ್ಷಗಳ ಹಿಂದೆಯೇ ನಮ್ಮ ಕನ್ನಡ ನಾಡಿಗೆ ಕರ್ಣಾಟಕ ಎಂಬ ಶಬ್ದ ಪ್ರಯೋಗಿಸಿ ಸಮಗ್ರ ಕರ್ನಾಟಕದ ಕನಸುಗಳನ್ನು ಡೆಪ್ಯೂಟಿ ಚನ್ನಬಸಪ್ಪ ಹೊಂದಿರುವುದು ಒಂದು ಅಪೂರ್ವ ದಾಖಲೆಯೇ ಸರಿ.

ಡೆಪ್ಯೂಟಿ ಚನ್ನಬಸಪ್ಪ ಅವರ ಕನಸುಗಳನ್ನು ನಿಖರ ನೆಲೆಯಲ್ಲಿ ನನಸಾಗಿಸಿದ ಕೀತರ್ಿ ಗಂಗಾಧರ ಮಡಿವಾಳೇಶ್ವರ ತುರಮರಿ, ವೆಂಕಟ ರಂಗೋ ಕಟ್ಟಿ, ಬಿ.ಕೆ.ಹುಯಿಲಗೋಳ, ಆರ್.ಬಿ.ಕರಂದಿಕರ, ರೊದ್ದ ಶ್ರೀನಿವಾಸರಾಯರು, ವಿ.ಭಾ.ಜೋಶಿ ಮುಂತಾದ ಮಹನೀಯರಿಗೆ ಸಲ್ಲುತ್ತದೆ. ಧಾರವಾಡ ಜಿಲ್ಲಾ ಸ್ಕೂಲ್ ಬೋರ್ಡ ಚೇರಮನ್ರಾಗಿ, ಮಹಾನಗರ ಪಾಲಿಕೆಯ ಮೇಯರ್ ಆಗಿ, ಶಾಸಕರಾಗಿ, ಜೊತೆಗೆ ಅಖಿಲ ಭಾರತ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಹುಮುಖ ಕನ್ನಡದ ಸೇವೆಗೈದ ರಾವ್ ಬಹದ್ದೂರ ರೊದ್ದ ಶ್ರೀನಿವಾಸರಾಯರು ಟ್ರೈನಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿದ್ದ ರಾ.ಹ. ದೇಶಪಾಂಡೆ ಟ್ರೈನಿಂಗ್ ಕಾಲೇಜಿನ ಉಪಪ್ರಾಚಾರ್ಯರು.ಟ್ರೈನಿಂಗ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಧೋಂಡೋ ನರಸಿಂಹ ಮುಳಬಾಗಿಲ, ಗಂಗಾಧರ ಮಡಿವಾಳೇಶ್ವರ ತುರಮರಿ, ಮ.ಪ್ರ.ಪೂಜಾರ, ಗಳಗನಾಥ ಮಾಸ್ತರರು ಕನ್ನಡ ವಾಙ್ಮಯ ಲೋಕದಲ್ಲಿ ಪ್ರಸಿದ್ಧರಾದವರು.

ಏಕೀಕರಣಕ್ಕೆ ಜಾಗೃತಿ :  ಕರ್ನಾಟಕ ಏಕೀಕರಣ ಹೋರಾಟಕ್ಕೆ ಪೂರಕವಾದ ಜಾಗೃತಿಯನ್ನು ಹುಟ್ಟುಹಾಕುವ ಮೂಲಕ, ಕನ್ನಡದ ನೆಲವೆಲ್ಲವೂ ಒಂದಾಗುವಂತೆ ಹೋರಾಟದ ಭೂಮಿಕೆಯನ್ನು ಸಿದ್ಧಗೊಳಿಸಿ ಕನ್ನಡದ ಸಾಕ್ಷಿಪ್ರಜ್ಞೆಯಂತೆ ಕಾರ್ಯನಿರ್ವಹಿಸಿರುವ ಧಾರವಾಡದ ಗಂಡು ಮಕ್ಕಳ ಟ್ರೈನಿಂಗ್ ಕಾಲೇಜು ಕನ್ನಡ ನಾಡಿನ ಇತಿಹಾಸಕ್ಕೆ ತನ್ನದೇ ಆದ ಮಹತ್ವದ ಪುಟಗಳನ್ನು ಸೇರಿಸಿದೆ. ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.) ಹುಟ್ಟಿಕೊಳ್ಳಲೂ ಸಹ ಟ್ರೈನಿಂಗ್ ಕಾಲೇಜು ತನ್ನ ಪಾಲನ್ನೂ ಸೇರಿಸಿದೆ. ಧಾರವಾಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕರ್ನಾಟಕ ಆಟ್ರ್ಸ ಕಾಲೇಜು (ಕೆಸಿಡಿ) ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಆರಂಭಗೊಳ್ಳಲು ಟ್ರೇನಿಂಗ್ ಕಾಲೇಜು ಆಶ್ರಯ ನೀಡಿದೆ. ಕನ್ನಡದ ವರನಟ ಡಾ.ರಾಜಕುಮಾರ ಅವರ ನೇತೃತ್ವದಲ್ಲಿ ನಡೆದ ಕನ್ನಡಪರ ಗೋಕಾಕ ಚಳುವಳಿಯ ಮೊದಲ ಸಂಘಟನಾ ಸಭೆ ಟ್ರೇನಿಂಗ್ ಕಾಲೇಜಿನ ಸಭಾಭವನದಲ್ಲಿಯೇ ನಡೆದದ್ದು ಐತಿಹಾಸಿಕ ಸಂಗತಿ. ಒಟ್ಟಾರೆ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಭ್ಯುದಯದ ಮತ್ತು ಕನ್ನಡ ವಿದ್ಯಾವಿಕಾಸದ ಉನ್ನತ ಕನಸು-ಕಲ್ಪನೆಗಳಿಗೆ ಮಾತೃ ಸಂಸ್ಥೆಯಾಗಿರುವ ಟ್ರೇನಿಂಗ್ ಕಾಲೇಜು ಕನ್ನಡದ ಕರ್ಮಭೂಮಿಯೇ ಸರಿ. ಡೆಪ್ಯೂಟಿ ಚೆನ್ನಬಸಪ್ಪ ಅವರನ್ನೊಳಗೊಂಡು ಕನ್ನಡ ನಾಡು- ನುಡಿಗೆ ಸಮರ್ಪಣೆಯಾದ ಮಹನೀಯರನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ಎಲ್ಲ ಪುಣ್ಯ ಪುರುಷರಿಗೆ ಸಮಸ್ತ ಕನ್ನಡಿಗರ ಪರವಾಗಿ ನಮ್ಮದೊಂದು ಗೌರವದ ನಮನ.