ಶಾಲೆಯಲ್ಲಿ ಸ್ಮಾರ್ಟ್ ಫೋನ್

ಈಗಂತೂ ಕೂಲಿ ಮಾಡುವವನಿಂದ ಹಿಡಿದು ಐಟಿ ಕಂಪನಿಯ ಸಿಇಓ ವರೆಗೂ ಎಲ್ಲರ ಕೈಯಲ್ಲೂ ಮೊಬೈಲ್. ಜಗತ್ತೇ ಮೊಬೈಲ್ಮಯ ಆದರೆ 13-14 ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಯಾರ ಹತ್ತಿರವಾದ್ರೂ ಮೊಬೈಲ್ ಇದ್ರೆ ಅವರು ಸ್ಥಿತಿವಂತರು, ಮೊಬೈಲ್ ಅವರ ಕೆಲಸಕ್ಕೆ ಬಹಳ ಅವಶ್ಯಕ ಎನ್ನುವ ಕಾಲವೊಂದಿತ್ತು. ಆದರೆ ಈಗ ಅವಶ್ಯಕತೆ ಇರಲಿ; ಜೀವಿಸಲು ಅಗತ್ಯವಿರುವ ವಸ್ತುಗಳಲ್ಲಿ ಮೊಬೈಲ್ ಕೂಡ ಒಂದು ಎನಿಸಿದೆ. ಕಾಲೇಜು ಕಲಿಯುವ ವಿಧ್ಯಾರ್ಥಿಗಳಿಂದ ಹಿಡಿದು ಹುಟ್ಟಿದ ಮಗುವಿನ ಕೈಗೂ ಮೊಬೈಲ್ ಅವಶ್ಯಕ ಸಾಮಗ್ರಿಯಾಗಿದೆ. ದೂರದೂರವಿರುವ ಕುಟುಂಬಗಳು ವಾಟ್ಸಪ್ ಗ್ರೂಪ್ ಮೂಲಕ ಹತ್ತಿರ ಬಂದಿವೆ. (ಕೇವಲ ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಕಷ್ಟ-ಸುಖ ಹಂಚಿಕೊಳ್ಳಲಷ್ಟೇ ಬಳಕೆಯಾಗುತ್ತಿಲ್ಲ ಅದೂ ನೀರು ಸಹ ಕುಡಿದಿದ್ದೀರೋ ಇಲ್ಲವೋ ಎಂದು ಕೇಳುವಷ್ಟು ಸೀಮಾತೀತ). ಪ್ರತಿಯೊಬ್ಬರೂ ಕಾರ್ಯನಿರ್ವಹಿಸುತ್ತಿರುವ ಅವರವರ ಕ್ಷೇತ್ರಗಳಲ್ಲಿ ಅವರ ಕೆಲಸಕ್ಕೆ ಅತೀ ಅವಶ್ಯಕ ಎನಿಸುವಷ್ಟು ಮೊಬೈಲ್ ಬಳಕೆಯಲ್ಲಿದೆ. ಮೊದಲೆಲ್ಲ ನಮ್ಮ ಹತ್ತಿರ ದಪ್ಪನೆಯ ಇಟ್ಟಂಗಿ ತರಹ ಮೊಬೈಲ್ಗಳಿದ್ದವು. ದಿನ ಕಳೆದಂತೆ ತೆಳ್ಳನೆಯ ಸ್ಲಿಮ್ ಸೆಟ್ಗಳು ಬಂದವು. ನಂತರ ಕಲರ್ ಫೋನ್ಗಳು, ದೊಡ್ಡ ಫೋನ್ಗಳು, ಸ್ಮಾರ್ಟ್ ಫೋನ್ಗಳು, ಟ್ಯಾಬ್ಗಳು ಹೀಗೆ ವರ್ಷದಿಂದ ವರ್ಷಕ್ಕೆ ನಾವೆಲ್ಲಾ ಹೊಸ-ಹೊಸ ಫೋನ್ ಖರೀದಿಸಿ ವಾಟ್ಸಪ್, ಫೇಸ್ಬುಕ್, ಟ್ವಿಟರ್ ಹೀಗೆ ಪ್ರತಿಯೊಂದರಲ್ಲೂ ಅಪ್ಡೇಟ್ ಆಗುತ್ತಿದ್ದೇವೆ. ಈ ಕ್ಷಣದಲ್ಲಿರುವ ಜಗತ್ತು ಇನ್ನೊಂದು ಕ್ಷಣದಲ್ಲಿಲ್ಲ. ನಿರೀಕ್ಷಿಸದಷ್ಟೂ ಮುಂದೆ ಹೋಗುತ್ತಿದೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಅದೇ ರೀತಿ ನಮ್ಮ ಶಿಕ್ಷಣ ಕ್ಷೇತ್ರದಲ್ಲೂ ಬಯೋಮೆಟ್ರಿಕ್, ಎಜ್ಯುಸ್ಯಾಟ್, ಸ್ಮಾರ್ಟ್ ಕ್ಲಾಸ್ ಈ ರೀತಿ ಬಹಳಷ್ಟು ಶಾಲೆಗಳಲ್ಲಿ ಅಳವಡಿಸಿಕೊಂಡರೂ ಕೆಲವು ಶಾಲೆಗಳಲ್ಲಿ ಸೌಲಭ್ಯಗಳ ಕೊರತೆಯಿಂದಾಗಿ ಮಕ್ಕಳಿಗೆ ಇನ್ನೂ ಹೆಚ್ಚಿನ ಗುಣಾತ್ಮಕ ಶಿಕ್ಷಣ ಒದಗಿಸಲು ಕಷ್ಟವಾಗುತ್ತಿದೆ. ಮೊಬೈಲ್ ಬಳಕೆ ಶಾಲೆಗಳಲ್ಲಿ ನಿಷೇಧ; ಇದು ನಮಗೆಲ್ಲರಿಗೂ ಗೊತ್ತಿರುವ ವಿಷಯ; ಅದನ್ನು ನಾವು ಕಡ್ಡಾಯವಾಗಿ ಪಾಲಿಸೋಣ. ಆದರೆ ಮೊಬೈಲ್ಗಳನ್ನು ಒಂದು ಪಾಠೋಪಕರಣವಾಗಿ ಬಳಕೆ ಮಾಡಿಕೊಂಡರೆ ಬೋಧನೆ-ಕಲಿಕೆಯಲ್ಲಿ ಬಹಳಷ್ಟು ಸುಲಭವಾಗುವುದು. ಅದಕ್ಕೆ ಸಂಬಂಧಿಸಿದಂತಹ ಬಹಳಷ್ಟು ಆ್ಯಪ್ಗಳು ಮಕ್ಕಳ ಶಿಕ್ಷಣವನ್ನು ಸರಳಗೊಳಿಸುವುದರ ಜೊತೆಗೆ ಕುತೂಹಲಭರಿತವಾಗಿವೆ.

1 ರಿಂದ 4 ನೆಯ ತರಗತಿಗಳಿಗೆ ಆಡಿಯೋ ರೈಮ್ಗಳು ಜೊತೆಗೆ ಕನ್ನಡ, ಇಂಗ್ಲೀಷ್, ಹಿಂದಿ ಹೀಗೆ ವಿವಿಧ ಭಾಷೆಗಳಲ್ಲಿ ವಿಡಿಯೋ ರೈಮ್ಸ್ಗಳನ್ನು ಮಕ್ಕಳು ನೋಡಿ ಹಾಗೂ ಪದೇ ಪದೇ ಕೇಳಿ ಬೇಗನೇ ಸಾಮೂಹಿಕವಾಗಿ, ವೈಯಕ್ತಿಕವಾಗಿ ಹಾಡಬಲ್ಲರು. ಹಾಡಿನಲ್ಲಿರುವ ಪದಗಳ ಅರ್ಥ, ಆ ಹಾಡಿನ ಹೂರಣವೂ ಕೂಡ ಮಕ್ಕಳಲ್ಲಿ ಗಟ್ಟಿಗೊಳ್ಳುತ್ತದೆ. ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಸಂಭಾಷಣೆಗಳು, ಕಥೆಗಳು, ಬಣ್ಣಗಳು, ಮೂಲಾಕ್ಷರಗಳು, ಶಬ್ದಗಳು, ವಾಕ್ಯಗಳು, ಗಣಿತ ಮೂಲಕ್ರಿಯೆಗಳು, ಅಂಕಿಗಳು, ಮಗ್ಗಿಗಳು, ಆಕಾರಗಳು, ಪರಿಸರ ಅಧ್ಯಯನದಲ್ಲಿ ಹಣ್ಣುಗಳು, ತರಕಾರಿಗಳು, ಪ್ರಾಣಿಗಳು, ಹೂಗಳು, ವಾಹನಗಳು, ತಿಂಗಳುಗಳು ಹಾಗೂ ಆಹಾರ-ಆರೋಗ್ಯ ಹೀಗೆ ಒಂದೇ ಎರಡೇ ಇತ್ಯಾದಿ ಎಲ್ಲವುಗಳ ಪರಿಚಯ ನೈಜವಿಧಾನದಲ್ಲಿಯೇ ಆಗುವುದರಿಂದ ಮಕ್ಕಳಿಗೆ ನೆನಪಿಟ್ಟುಕೊಳ್ಳುವುದು ಕೂಡ ಸುಲಭ. ಹೀಗೆ ಮಾಡಿದರೆ ಮಕ್ಕಳ ಶಾಲೆ ಬಿಟ್ಟು ಹೋಗುವುದೇ ಇಲ್ಲ. ಅಷ್ಟೊಂದು ನಲಿವನ್ನು ಕಲಿಕೆಯಲ್ಲಿ ತಂದುಕೊಡುತ್ತದೆ. ಕಂಠಪಾಠದಿಂದ ಕಲಿಕೆಯನ್ನು ಮುಕ್ತಗೊಳಿಸಿದಂತಾಗುತ್ತದೆ.

5 ರಿಂದ 8 ನೆಯ ತರಗತಿಗೆ ಸಂಬಂಧಿಸಿದಂತೆ ಕನ್ನಡ, ಇಂಗ್ಲೀಷ್, ಹಿಂದಿಯಲ್ಲಿ ಆಯಾ ತರಗತಿಯ ಮಕ್ಕಳ ಬುದ್ಧಿಮಟ್ಟಕ್ಕನುಗುಣವಾಗಿ ಹಾಡು, ಕಥೆ, ವ್ಯಾಕರಣ, ಭಾಷಾಂತರಿಸುವಿಕೆ ಇತ್ಯಾದಿ ಮಕ್ಕಳ ಮನಸೂರೆಗೊಳ್ಳುತ್ತವೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕೂಡ ಮುಂದೆ ತರುವಲ್ಲಿ ಇದು ಸಹಕಾರಿಯಾಗಿದೆ. ಅದೇ ರೀತಿ ಪಿಡಿಎಫ್ ಗಳಲ್ಲಿನ ಅನೇಕ ವಿಷಯಾಂಶಗಳನ್ನು ಬೋಧನೆ-ಕಲಿಕೆಗಾಗಿ ಸದುಪ ಯೋಗಪಡಿಸಿಕೊಳ್ಳಬಹುದು. ವಿವಿಧ ಭಾಷೆಗಳಲ್ಲಿ ಶಬ್ದಕೋಶ ತೆರೆದು ಪದಗಳ ಅರ್ಥ ಹುಡುಕಬಹುದು. ಕವಿ, ಲೇಖಕರ ಚಿತ್ರ, ಪರಿಚಯ, ಕೃತಿಗಳು, ವಿಡಿಯೋಗಳು ಕಲಿಕೆಯನ್ನು ಇನ್ನೂ ಹೆಚ್ಚು ಮನನ ಮಾಡುತ್ತವೆ. ಲೇಖಕರ ಅನೇಕ ಕೃತಿಗಳೂ ಕೂಡ ಪಿಡಿಎಫ್ಗಳಲ್ಲಿ ಲಭ್ಯ. ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ನಕಾಶೆಗಳು ಲಭ್ಯವಿಲ್ಲದಿದ್ದಲ್ಲಿ ವಿವಿಧ ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶಗಳ ಹಾಗೂ ಗೋಳದ ಆ್ಯಪ್ಗಳ ಮೂಲಕ ವಾರಕ್ಕೊಂದು ದಿನ ಸ್ಥಳ ಪರಿಚಯವನ್ನು ಮಕ್ಕಳಿಂದಲೇ ಮಾಡಿಸುವುದರಿಂದ ಮಕ್ಕಳಿಗೆ ಜಗತ್ತಿನ ಪರಿಚಯವನ್ನು ಸುಲಭವಾಗಿ ಮಾಡಿಸುವುದರೊಂದಿಗೆ ಅಕ್ಷಾಂಶ, ರೇಖಾಂಶ, ಉತ್ತರಾರ್ಧ ಗೋಳ, ದಕ್ಷಿಣಾರ್ಧ ಗೋಳ, ಕಾಲವಲಯಗಳನ್ನು ಕೂಡ ಮಕ್ಕಳಿಗೆ ಪರಿಚಯಿಸಬಹುದು. ಕೊಲ್ಲಿ, ಖಾರಿ, ಕಣಿವೆ, ಜ್ವಾಲಾಮುಖಿ, ಭೂಕಂಪ, ಸುನಾಮಿ, ಯುದ್ಧ ಭೂಮಿ, ಸ್ವಾತಂತ್ರ್ಯ ಹೋರಾಟ/ಹೋರಾಟಗಾರರು, ಪೌರನೀತಿ ಕಲಿಕಾಂಶಗಳು ಹೀಗೆ ಹತ್ತು ಹಲವು ಕಲಿಕಾಂಶಗಳನ್ನು ಕುರಿತು ಇರುವ ಚಿತ್ರ, ಹಾಡು, ವಿಡಿಯೋಗಳಿಂದ ಮಕ್ಕಳಿಗೆ ಕಲಿಕೆ ಸಂಪೂರ್ಣ ಅರ್ಥವಾಗುತ್ತದೆ.

ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಯೋಗಗಳು, ಸಂಯುಕ್ತಗಳು, ರಾಸಾಯನಿಕ ವಸ್ತುಗಳು, ಜೀವಸತ್ವಗಳು, ಪರಿಸರ, ಮಾಲಿನ್ಯ, ಮಣ್ಣು, ವಿವಿಧ ಗಿಡಮರಗಳು, ನೀರಿನ ಮೂಲಗಳು, ಆಹಾರದ ಮೂಲಗಳು, ಗ್ರಹಗಳು, ಉಪಗ್ರಹಗಳು- ಅವುಗಳ ಸ್ಥಾನ, ದೂರ, ಸೂರ್ಯ, ಚಂದ್ರ, ನಕ್ಷತ್ರ ಒಟ್ಟಿನಲ್ಲಿ ಇಡೀ ಸೌರವ್ಯೂಹ ಹೀಗೆ ಹತ್ತು ಹಲವಾರು ವಿಷಯಾಂಶಗಳಿಗೆ ಸಂಬಂಧಿಸಿದಂತೆ ಚಿತ್ರಗಳು, ಹಾಡುಗಳು, ವಿಡಿಯೋಗಳನ್ನು ತೋರಿಸುತ್ತ ಬೋಧಿಸಿದರೆ ಎಂತಹ ಮಕ್ಕಳಾದರೂ ಕಲಿಯುವುದರಲ್ಲಿ ಸಂದೇಹವಿಲ್ಲ. ಗಣಿತ ವಿಷಯದಲ್ಲಿ ಬರುವ ಮೂಲಕ್ರಿಯೆಗಳು, ಆಕಾರ, ಗಾತ್ರ, ನಾಣ್ಯ ರೂಪಾಯಿ, ಕಾಲ ಗಣನೆ, ಅಳತೆ, ತೂಕದ ಬೊಟ್ಟು, ಪ್ರಮೇಯ ಹೀಗೆ ವಿವಿಧ ಕಲಿಕಾಂಶಗಳನ್ನು ಕಥೆ, ಹಾಡು, ಚಿತ್ರ, ಪಿಡಿಎಫ್, ವಿಡಿಯೋಗಳ ಮೂಲಕ ಗಣಿತ ಬೋಧಿಸಿದಾಗ ಯಾವ ಮಕ್ಕಳಿಗೂ ಗಣಿತ ಕಬ್ಬಿಣದ ಕಡಲೆಯಾಗುವುದಿಲ್ಲ. ಸುಲಿದ ಬಾಳೆಹಣ್ಣಿನಂತೆ ಆಗುವುದರಲ್ಲಿ ಖಂಡಿತ ಸಂಶಯವಿಲ್ಲ.

ನಮ್ಮ ದೇಶದಲ್ಲೇ ಏಕೆ ಇಡೀ ಜಗತ್ತಿನಲ್ಲಿ ಆಗಿಹೋದ ಅನೇಕ ಪ್ರಸಿದ್ಧ ಮಹನೀಯರ ಚಿತ್ರಗಳು, ವಿಡಿಯೋಗಳು, ಸಂಭಾಷಣೆಗಳನ್ನು ತೋರಿಸಿ ಮಕ್ಕಳಿಗೆ ಛದ್ಮವೇಷ ಮಾಡಿಸಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕೂಡ ಅನುಕೂಲ. ಹೀಗೆ ಕನ್ನಡ, ಇಂಗ್ಲೀಷ್, ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಹೀಗೆ ಎಲ್ಲ ವಿಷಯಗಳಲ್ಲೂ ಆಯಾ ಕಲಿಕಾಂಶಗಳಲ್ಲಿ ಅವಶ್ಯಕವಿದ್ದಲ್ಲಿ ವಿಷಯ ಪರಿಕಲ್ಪನೆಯನ್ನು ಮಕ್ಕಳಿಗೆ ಉತ್ತಮವಾಗಿ ನೀಡುವಲ್ಲಿ ಇರುವ ಸ್ಮಾರ್ಟ್ಫೋನ್ ಬಳಸಿಕೊಂಡರೆ, ಸದ್ಬಳಕೆ ಮಾಡಿಕೊಂಡರೆ ಕಲಿಕೆಗೆ ಇನ್ನಷ್ಟೂ ಮೆರುಗು ಕೊಟ್ಟಂತಾಗುತ್ತದೆ. ಅದರ ಜೊತೆ ಶಾಲೆಯಲ್ಲಿ ಪ್ರೊಜೆಕ್ಟರ್ ಇದ್ದರಂತೂ ಕನೆಕ್ಟರ್ ಬಳಸಿ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳೂ ಕೂಡ ಕುತೂಹಲಭರಿತರಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಲ್ಲರು. ಕಂಠಪಾಠದಿಂದ ಹೊರಬಂದು ಕಲಿಕೆಯನ್ನು ಅಚ್ಚೊತ್ತಿದಂತೆ ಬೋಧಿಸಲು ಸಹಕಾರಿಯಾಗಿದೆ. ಕನ್ನಡ ನಾಡಿನಲ್ಲಿ ಹುಟ್ಟಿದ ನಮಗೆಲ್ಲರಿಗೂ ಕನ್ನಡ ಬೇಕೇ ಬೇಕು. ಅದರೊಂದಿಗೆ ಜ್ಞಾನದ ಹೆಬ್ಬಾಗಿಲಾದಂತಹ ಇಂಗ್ಲೀಷ್ ಜ್ಞಾನ ಕೂಡ ಮಕ್ಕಳಿಗೆ ಅವಶ್ಯಕ. ಎರಡನ್ನೂ ಸರಿದೂಗಿಸಿಕೊಂಡು ಈ ರೀತಿ ವಿನೂತನ ತಂತ್ರಜ್ಞಾನದೊಂದಿಗೆ ಮಕ್ಕಳೊಂದಿಗೆ ಬೆರೆತರೆ ಯಾವ ಮಕ್ಕಳೂ ನಮ್ಮ ಸರಕಾರಿ ಶಾಲೆ ಬಿಟ್ಟು ಹೋಗುವುದಿಲ್ಲ. ಸರ್ಕಾರಿ ಶಾಲೆಯತ್ತ ಮಕ್ಕಳು ಆಕರ್ಷಿತರಾಗಲು ನಮ್ಮ ಶಿಕ್ಷಕರೆಲ್ಲರೂ ಸೇರಿ ಇನ್ನೂ ಹೆಚ್ಚು ಕ್ರೀಯಾಶೀಲರಾಗೋಣ. ಸರಕಾರಿ ಶಾಲೆಗಳನ್ನು ಸುಜ್ಞಾನದ ತಾಣಗಳನ್ನಾಗಿಸಿ ಸಬಲೀಕರಣಗೊಳಿಸೋಣ ಎಲ್ಲ ಮಕ್ಕಳನ್ನು ಕಲಿಕೆಯ ಕಡೆಗೆ ಆಕಷರ್ಿಸೋಣ ಎಂಬುದೇ ನಮ್ಮೆಲ್ಲರ ಆಶಯ.